ಫೋಕರ್ಸ್, ಕಾರ್ಲ್ ಅಗಸ್ಟ್
1906. ಅಮೇರಿಕದ ರಸಾಯನ ವಿಜ್ಞಾನಿ. ಇಲಿನಾಯ್ಸನ ಡೆಕಟುರ್ ಎಂಬಲ್ಲಿ 1906 ಸೆಪ್ಟೆಂಬರ್ 1ರಂದು ಜನನ. 1928ರಲ್ಲಿ ಇಲಿನಾಯ್ಸ್ ವಿಶ್ವವಿದ್ಯಾಲಯದ ಸ್ನಾತಕ ಪದವಿಯನ್ನೂ 1931ರಲ್ಲಿ ವಿಸ್ಕಾನ್ಸಿನ್ ವಿಶ್ವವಿದ್ಯಾಲಯದ ಪಿಎಚ್.ಡಿ. ಪ್ರಶಸ್ತಿಯನ್ನೂ ಪಡೆದರು. ಮುಂದಿನ ಸಂಶೋಧನೆ ಏಲ್ ವಿಶ್ವವಿದ್ಯಾಲಯದಲ್ಲಿ ನಡೆಯಿತು. ಮೂರು ವರ್ಷಗಳ ತರುವಾಯ ಮರ್ಕ್ ಕಂಪನಿ ಇವರನ್ನು ಔದ್ಯಮಿಕ ರಸಾಯನವಿಜ್ಞಾನಿಯಾಗಿ ನೇಮಿಸಿಕೊಂಡಿತು. 1956ರ ವೇಳೆಗೆ ಸಂಸ್ಥೆಯ ಮೂಲಭೂತ ಸಂಶೋಧನವಿಭಾಗದ ನಿರ್ದೇಶಕರಾಗಿ 1963ರಲ್ಲಿ ಕ್ಯಾಲಿಫೋರ್ನಿಯದ ಸ್ಟ್ಯಾನ್‍ಫರ್ಡ್ ಸಂಶೋಧನಾಲಯಲ್ಲಿ ಅಧ್ಯಕ್ಷರಾದರು.

	ಮರ್ಕ್ ಕಂಪನಿ ಮೂಲತಃ ಔಷಧ ನಿರ್ಮಾಣ ಸಂಸ್ಥೆಯಾಗಿದ್ದುದರಿಂದ ವೈದ್ಯಕೀಯ ಮಹತ್ತ್ವಗಳ ಸಂಶ್ಲೇಷಿಸುವುದರಲ್ಲಿ ಅದಕ್ಕೆ ಅಪಾರ ಆಸಕ್ತಿ. ಜೀವಸತ್ತ್ವಗಳ ಸಂಶ್ಲೇಷಣೆಯನ್ನು ಕುರಿತ ಸಂಶೋಧನೆ 1930ರ ಸುಮಾರಿಗೆ ಬಿರುಸಿನಿಂದ ಸಾಗಿತ್ತು. ಇದರಿಂದ ಉತ್ತೇಜಿತರಾದ ಫೋಕರ್ಸ್ ಮತ್ತು ಸಹೋದ್ಯೋಗಿಗಳು ಕಾರ್ಯನಿರತರಾಗಿ ಜೀವಸತ್ತ್ವ ಬಿ ಗುಂಪಿಗೆ ಸೇರಿದ ಪಿರಿಡಾಕ್ಸಿನ್, ಬಯೊಟಿನ್, ಪ್ಯಾಂಟೊಥೆನಿಕ್ ಆಮ್ಲ ಇತ್ಯಾದಿಗಳನ್ನು ಸಂಶ್ಲೇಷಿಸಿ ತನ್ಮೂಲಕ ಅವುಗಳ ಅಣುರಚನೆಯನ್ನು ಶೋಧಿಸಿದರು.

	ಫೋಕರ್ಸ್ ಇನ್ನೂ ಕಾಲೇಜು ವಿದ್ಯಾರ್ಥಿಯಾಗಿದ್ದಾಗಲೇ ಮಿನೊ ಮತ್ತು ಮರ್ಫಿ ಎಂಬವರು ಯಕೃತಿನಲ್ಲಿ ಪರ್ನಿಷಸ್ ಅನೀಮಿಯವನ್ನು (ಮಾರಕ ರಕ್ತಹೀನತೆ) ಗುಣಪಡಿಸಬಲ್ಲ ಒಂದು ಅಂಶವಿದೆ ಎಂಬುದನ್ನು ಪತ್ತೆಹಚ್ಚಿದರು. ಆದರೆ ಚಿಕಿತ್ಸೆಗೆ ಬೃಹತ್ಪ್ರಮಾಣದಲ್ಲಿ ಯಕೃತ್ತನ್ನು ರೋಗಿಗೆ ತಿನಿಸುವುದು ಹಿಂಸೆಯಾಗಿದ್ದುದಲ್ಲದೆ ತತ್ಪೂರ್ವ ಅದನ್ನು ಕೆಡದಂತೆ ಕಾಪಾಡುವುದೂ ಒಂದು ಸಮಸ್ಯೆಯಾಗಿತ್ತು. ಅದರಲ್ಲಿದ್ದ ಜೀವಸತ್ತ್ವ ಭಾಗವನ್ನು ಬೇರ್ಪಡಿಸಿದ್ದೇ ಆದರೆ ಪರಿಸ್ಥಿತಿ ಸುಧಾರಿಸುತ್ತಿತ್ತು. ಈ ದಿಸೆಯಲ್ಲಿ ಸಂಶೋಧನೆ ಮುಂದುವರಿದು ಅದೊಂದು ಗುಂಪಿಗೆ ಸೇರಿದ ಜೀವಸತ್ತ್ವ ಎಂದು ದೃಢಪಟ್ಟಿದ್ದರಿಂದ ಅದಕ್ಕೆ ಜೀವಸತ್ತ್ವ ಬಿ-12 ಎಂದು ಹೆಸರಿಸಲಾಯಿತು. ಯಕೃತ್ತಿನಿಂದ ಜೀವಸತ್ತ್ವ ಸಾರವನ್ನು ತಯಾರಿಸಿರೂ ಅದರ ಜೀವಸತ್ತ್ವಾಂಶದ ನಿರ್ಣಯ ಸುಲಭವಾಗಿರಲಿಲ್ಲ. ಆಗ ರೂಢಿಯಲ್ಲಿದ್ದ ಏಕೈಕ ಮಾರ್ಗವೆಂದರೆ ಪರ್ನಿಷಸ್ ಅನೀಮಿಯದಿಂದ ನರಳುತ್ತಿರುವ ರೋಗಿಗಳಿಗೆ ಈ ಜೀವ ಸತ್ವದ ಸಾರವನ್ನು ಉಣಿಸಿ ಅನಂತರ ಅವರ ರಕ್ತದಲ್ಲಿ ರೆಟಿಕ್ಯುಲೊಸೈಟ್ ಎಂಬ ಒಂದು ಬಗೆಯ ಅಪಕ್ವ ಕೆಂಪು ರಕ್ತಕಣ ರೂಪುಗೊಳ್ಳುವ ದರವನ್ನು ಅಳೆಯುತ್ತ ಹೋಗುವುದು. ಇದು ರೇಜಿಗೆಯ ಕೆಲಸ. ಪರಿಸ್ಥಿತಿ ಹೀಗಿದ್ದಾಗ ಮರ್ಕ್ ಕಂಪನಿ ಈ ಸಮಸ್ಯೆಯನ್ನು ಫೋಕರ್ಸ್ ಮತ್ತು ಸಹಚರಿಗಳಿಗೆ ವಹಿಸಿತು. ಅವರ ಸಂಶೋಧನೆಯ ಫಲವಾಗಿ ಕೆಲವು ಬ್ಯಾಕ್ಟೀರಿಯಗಳ ಬೆಳೆವಣಿಗೆಗೆ ಜೀವಸತ್ತ್ವ ಬಿ-12 ಅಗತ್ಯವೆಂದು ಗೊತ್ತಾಯಿತು. ಅವರು ಈ ಬ್ಯಾಕ್ಟೀರಿಯಗಳನ್ನು ಬಿ-12 ಇಲ್ಲದ ಪೋಷಕಗಳ ಮಾಧ್ಯಮದಲ್ಲಿ ಬೆಳೆಸಿದರು. ಅನಂತರ ಅವುಗಳಿಗೆ ಜೀವಸತ್ತ್ವ ಬಿ-12 ಉಣಿಸಿ ಅವುಗಳ ಬೆಳೆವಣಿಗೆಯ ದರವನ್ನು ಸೂಕ್ಷ್ಮವಾಗಿ ಗಮನಿಸಿದಾಗ ಅದು ಜೀವಸತ್ತ್ವದ ಪ್ರಮಾಣಕ್ಕೆ ಅನುಗುಣವಾಗಿರುವುದು ಕಂಡು ಬಂತು. ಇದರಿಂದ ರೋಗಿಗಳಿಗೆ ತೊಂದರೆ ಕೊಡದೆ ಜೀವಸತ್ತ್ವದ ಪರಿಮಾಣಾತ್ಮಕ ಪ್ರಭಾವ ಅಳೆಯುವ ವಿನೂತನ ವಿಧಾನ ಸಿಕ್ಕಂತಾಯಿತು.

	ಅನತಿ ಕಾಲದಲ್ಲಿ ಜೀವಸತ್ತ್ವವನ್ನು ಶುದ್ದೀಕರಿಸುವ ವಿಧಾನಗಳು ರೂಪುಗೊಂಡವು. ಜೀವಸತ್ತ್ವ ಬಿ-12ರ ಕೆಂಪು ಹರಳುಗಳು ಮೈದಳೆದವು. ಇದೇ ವೇಳೆ ಇಂಗ್ಲೆಂಡಿನಲ್ಲಿ ಬೇರೊಂದು ಸಂಶೋಧಕ ತಂಡ ಈ ಕಾರ್ಯದಲ್ಲಿ ಯಶಸ್ವಿಯಾಯಿತೆಂಬುದು ಗಮನಾರ್ಹ. ಆದರೆ ಅವರಿಗೆ ಬ್ಯಾಕ್ಟೀರಿಯಲ್ ಪರೀಕ್ಷಾವಿಧಾನ ಗೊತ್ತಿರಲಿಲ್ಲ. ಮಾನವ ದೇಹ ಪೋಷಣೆಗೆ ಬೇಕಾದ ಬಿ-12ರ ಮೊತ್ತ ಇತರ ಜೀವಸತ್ತ್ವಗಳಿಗಿಂತ ಅತ್ಯಲ್ಪ. ಮೇಲಾಗಿ ಅದರ ಅಣುರಚನೆ ಸಂಕೀರ್ಣ. ಹ್ಯಾಡ್ಕಿನ್ ಎಂಬವರು ಅದರ ಎಲೆಕ್ಟ್ರಾನ್ ಸಾಂದ್ರತೆಗಳನ್ನು ಅಳೆದು ಫಲಿತಾಂಶಗಳನ್ನು ಆಧುನಿಕ ಗಣಕಗಳ ನೆರವಿನಿಂದ ಅರ್ಥೈಸಿ ಅಣುರಚನೆಯನ್ನು ಶೋಧಿಸಿದ್ದಾರೆ (1956). ಈ ಎಲ್ಲ ಕಾರಣಗಳಿಂದ ಅದೊಂದು ಅಪೂರ್ವ ರಾಸಾಯನಿಕ ಎನಿಸಿಕೊಂಡಿದೆ.

	ಬಿ-12 ಅಣುರಚನೆಯಲ್ಲಿ ಒಂದು ಸಯನೈಡ್ ಪುಂಜ ಮತ್ತು ಕೋಬಾಲ್ಟ್ ಪರಮಾಣುಗಳಿವೆ. ಇದು ಕೋಬಾಲ್ಟ್ ಪರಮಾಣುವುಳ್ಳ ಪ್ರಪ್ರಥಮ ನೈಸರ್ಗಿಕ ಸಂಯುಕ್ತವಾದ್ದರಿಂದ ಇದನ್ನು ಸಯನೊಕೋಬಾಲಮೀನ್ ಎಂದು ಹೆಸರಿಸಿದ್ದಾರೆ. ಇದು ಫರ್ನಿಷಸ್ ಅನೀಮಿಯ ರೋಗವನ್ನು ಗುಣಪಡಿಸುವುದೆಂಬುದು ನಿಜ. ಆದರೆ ಆ ರೋಗ ಉಂಟಾಗಲು ಈ ಜೀವಸತ್ತ್ವದ ಕೊರತೆ ಕಾರಣವಲ್ಲ. ಏಕೆಂದರೆ ನಮ್ಮ ಅನುದಿನದ ಆಹಾರದಲ್ಲಿ ಅದು ಕೊಂಚವಾದರೂ ಇದ್ದೇ ಇರುವುದು. ಒಂದು ವೇಳೆ ಇರಲಿಲ್ಲವೆನ್ನಿ. ಆಗ ಆಹಾರದಲ್ಲಿ ಲೇಶಮಾತ್ರ ಕೋಬಾಲ್ಟ್ ಇದ್ದರೂ ಸಾಕು. ಅದರಿಂದ ನಮ್ಮ ಕರುಳಿನಲ್ಲಿರುವ ಬ್ಯಾಕ್ಟೀರಿಯ ಬಿ-12ನ್ನು ಸಂಶ್ಲೇಷಿಸಿ ಒದಗಿಸುವುವು, ಹಾಗಾದರೆ ರೋಗ ಬರುವುದೇಕೆ? ಕಾರಣವಿಷ್ಟೆ. ಜಠರರಸದಲ್ಲಿ ಯಾವುದೋ ಒಂದು ನಿಗೂಢ ಪದಾರ್ಥದ ಕೊರತೆಯುಂಟಾಗಿ ಅದಿಲ್ಲದೆ ರೋಗಿ ಜೀವಸತ್ತ್ವ ಬಿ-12ರ ಬೃಹದಣುಗಳನ್ನು ಅರಗಿಸಿಕೊಳ್ಳಲಾರ. ಆ ನಿಗೂಢ ಪದಾರ್ಥದ ಪತ್ತೆ ಪ್ತಯತ್ನ ನಡೆಯುತ್ತಿದೆ. ಆದರೂ ರಕ್ಷಣಾ ಕ್ರಮವಾಗಿ ಜೀವಸತ್ತ್ವ ಗುಳಿಗೆಗಳಲ್ಲಿ ಸಯನೊಕೋಬಾಲಮೀನನ್ನು ಕಡ್ಡಾಯವಾಗಿ ಸೇರಿಸಿರುತ್ತಾರೆ.

	ರಷ್ಯನ್‍ಸಂಜಾತ ಜೀವರಸಾಯನವಿಜ್ಞಾನಿ ವಾಕ್ಸ್‍ಮನ್, 1943ರಲ್ಲಿ ಸ್ಟ್ರೆಪ್ಟೊಮೈಸಿನ್ ಎಂಬ ಜೀವನಿರೋಧಕವನ್ನು ಶೋಧಿಸಿದರಷ್ಟೆ. ಐದು ವರ್ಷಗಳ ತರುವಾಯ ಅದರ ರಾಸಾಯನಿಕ ರಚನೆಯನ್ನು ಕಂಡುಹಿಡಿಯಲಾಯಿತು. ಇದರಲ್ಲಿ ಫೋಕರ್ಸ್ ತಂಡದ ಪಾತ್ರವಿತ್ತೆಂದು ವರದಿ.
(ಎಚ್.ಜಿ.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ